ಟೇಲರ್ ಭೇದಾತ್ಮಕ ತುಂಡು ದರ
ಕೂಲಿ ಪಾವತಿ ಪದ್ಧತಿಗಳಲ್ಲೊಂದು. ವೈಜ್ಞಾನಿಕ ವ್ಯವಸ್ಥಾಪನೆಯ ಪಿತನೆನಿಸಿದ ಫ್ರೆಡರಿಕ್ ವಿನ್‍ಸ್ಲೋ ಟೇಲರ್ (1856-1915)  ರೂಪಿಸಿದ್ದರಿಂದ ಈ ಪದ್ಧತಿಗೆ ಅವನ ಹೆಸರು ಬಂದಿದೆ. (ಟೇಲರ್ ಡಿಫರೆನ್ಷಿಯಲ್ ಪೀಸ್-ರೇಟ್).

	ಕಡಿಮೆ ಉತ್ಪಾದಿಸಿದ ಕಾರ್ಮಿಕನಿಗೆ ಕಡಿಮೆ ತುಂಡು ದರವನ್ನೂ ಅಧಿಕ ಉತ್ಪಾದಿಸಿದವನಿಗೆ ಹೆಚ್ಚಿನ ತುಂಡು ದರವನ್ನು ಕೊಡುವುದು ಇದರ ಹಿಂದೆ ಇರುವ ತತ್ತ್ವ. ಒಂದು ಗೊತ್ತಾದ ಅವಧಿಯಲ್ಲಿ (ಉದಾ: ಒಂದು ದಿನ ಪ್ರಸಾಮಾನ್ಯ ಪರಿಸ್ಥಿತಿಯಲ್ಲಿ ಒಬ್ಬ ಪ್ರಸಾಮಾನ್ಯ ಕಾರ್ಮಿಕ ಎಷ್ಟು ಉತ್ಪಾದಿಸಬಹುದೆಂಬುದನ್ನು ನಿರ್ಧರಿಸಿ, ಇಷ್ಟೊಂದು ಅಥವಾ ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ಉತ್ಪಾದನೆಗೆ ಭಿನ್ನ ಕೂಲಿದರಗಳನ್ನು ನಿಷ್ಕರ್ಷಿಸಲಾಗುತ್ತದೆ. 	ಕೆಲಸಮಾಡಲು ಸೂಕ್ತ ಪರಿಸ್ಥಿತಿಗಳನ್ನೂ ತರಬೇತನ್ನೂ ಉಪಕರಣಗಳನ್ನೂ ಒದಗಿಸಿ. ಕೆಲಸವನ್ನು ಶಿಷ್ಟೀಕರಿಸಿ, ಉತ್ಪಾದನೆಯನ್ನು ವಿಶ್ಲೇಷಿಸಿ ನಿಗದಿಪಡಿಸಿ. ಆ ಬಗ್ಗೆ ಕಾರ್ಮಿಕರಿಗೆ ಸೂಚನೆ ನೀಡುವುದರ ಮೂಲಕ ಉತ್ಪಾದನೆಯನ್ನೂ ಹೆಚ್ಚಿಸಿ ವೆಚ್ಚವನ್ನು ತಗ್ಗಿಸಬಹುದೆಂದು ಟೇಲರನ ನಂಬಿಕೆ. ಕಾಲದ ಅಧ್ಯಯನಕ್ಕೆ ಟೇಲರ್ ಹೆಚ್ಚಿನ ಪ್ರಾಶಸ್ತ್ಯ ನೀಡಿದ. ಕೂಲಿಗಾರರಿಗೆ ಶಿಷ್ಟೀಕೃತ ಕೆಲಸ ಪರಿಸ್ಥಿತಿಗಳನ್ನೂ ಯಂತ್ರೋಪಕರಣಗಳನ್ನೂ ಒದಗಿಸಬೇಕೆಂಬುದು ಅವನ ನಿಲುವು. ಆಗ ಉತ್ಪಾದನೆಯನ್ನು ಹೆಚ್ಚಿಸುವ ಹೊಣೆಯಲ್ಲ ಕಾರ್ಮಿಕನ ಮೇಲೇ ಇರುತ್ತದೆ. ಕಡಿಮೆ ದರದ ಕೂಲಿ ಕೊಡುವುದರಿಂದ ಉತ್ಪಾದನ ವೆಚ್ಚವನ್ನು ಕಡಿಮೆಯಿರಿಸಿದಂತಾಗುವುದಿಲ್ಲವೆಂಬುದನ್ನು ಟೇಲರ್ ಸಾಧಿಸಿ ತೋರಿಸಿದ. ಅಂತಯೇ ಹೆಚ್ಚಿನ ದರದ ಕೂಲಿ ಕೊಟ್ಟು ಉತ್ಪಾದನೆಯನ್ನು ಹೆಚ್ಚಿಸುವುದಾದರೆ. ಉತ್ಪಾದನೆಯಾದ ಪ್ರತಿ ಏಕಮಾನಕ್ಕೂ (ಯೂನಿಟ್) ಕಡಿಮೆ ಉತ್ಪಾದನದ ವೆಚ್ಚ ತಗಲುವುದು ಸಾಧ್ಯವೆಂಬುದನ್ನೂ ಸ್ಪಷ್ಟಪಡಿಸಿದ. ಹೆಚ್ಚಿನ ದರದ ಕೂಲಿಯ ಆಕರ್ಷಣೆಯಿಂದ ಕಾರ್ಮಿಕರು ಶ್ರದ್ಧೆಯಿಂದ ದುಡಿದಾಗ ಉತ್ಪಾದನೆ ಹೆಚ್ಚಿದರೂ ಸ್ಥಿರವೆಚ್ಚಗಳು ವ್ಯತ್ಯಾಸವಾಗದ್ದರಿಂದ ಪ್ರತಿ ಏಕಮಾನದ ಉತ್ಪಾದನ ವೆಚ್ಚ ಕಡಿಮೆಯಾಗುತ್ತದೆ.

	ಟೇಲರ್ ಭೇದಾತ್ಮಕ ದರ ಅತ್ಯುತ್ತಮ ಕಾರ್ಮಿಕರನ್ನು ಆಕರ್ಷಿಸಲು ಯತ್ನಿಸುತ್ತದೆ. ಟೇಲರ್ ಎಂದೂ ಸೋಮಾರಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಬಯಸಲಿಲ್ಲ. ಅವನ ಭೇದಾತ್ಮಕ ತುಂಡು ದರ ಯೋಜನೆಯಲ್ಲಿ ಪ್ರತಿ ಕಾರ್ಮಿಕನಿಗೂ ಎರಡು ತುಂಡು ಕೂಲಿದರಗಳನ್ನು ನಿಗದಿಗೊಳಿಸಲಾಗಿರುತ್ತದೆ. ಒಂದು ಹೆಚ್ಚಿನ ದರ; ಇನ್ನೊಂದು ಕಡಿಮೆಯ ದರ. ಇದರ ಜೊತೆಗೇ ಶಿಷ್ಟೀಕೃತ ಉತ್ಪಾದನೆಯನ್ನೂ ನಿಗದಿಗೊಳಿಸಲಾಗಿರುತ್ತದೆ. ಕಾರ್ಮಿಕ ಶಿಷ್ಟೀಕೃತ ಉತ್ಪಾದನೆಯನ್ನು ತಲುಪದಿದ್ದರೆ ಅವನ ಉತ್ಪಾದನೆಯ ಮೇಲೆ ಕಡಿಮೆ ದರದಲ್ಲಿ ಅವನಿಗೆ ಕೂಲಿ ಕೊಡಲಾಗುವುದು. ಶಿಷ್ಟೀಕೃತ ಉತ್ಪಾದನೆಯನ್ನು ತಲುಪಿದ ಅಥವಾ ಮೀರಿದ ಕಾರ್ಮಿಕನಿಗೆ ಅವನ ಉತ್ಪಾದನೆಯ ಮೇಲೆ ಹೆಚ್ಚಿನ ದರದಲ್ಲಿ ಕೂಲಿ ಕೊಡಲಾಗುವುದು.

	ಕಾರ್ಮಿಕನ ಶಿಷ್ಟೀಕೃತ ಉತ್ಪಾದನೆ ಎಷ್ಟೆಂಬುದನ್ನು ಕಾಲದ ವೈಜ್ಞಾನಿಕ ಅಧ್ಯಯನದ ಅನಂತರ ನಿರ್ಧರಿಸಲಾಗುತ್ತದೆ. ಅತ್ಯುತ್ತಮ ಕಾರ್ಮಿಕ ಸಾಮಾನ್ಯ ಕಾರ್ಮಿಕನಿಗಿಂತ 100ರಷ್ಟು ಹೆಚ್ಚಿನ ಕೂಲಿ ಗಳಿಸುವ ಸಾಧ್ಯತೆ ಇರುವಂತೆ ಕೂಲಿಯ ದರಗಳನ್ನು ನಿಗದಿಪಡಿಸಲಾಗಿರುತ್ತದೆ.

	ಉದಾಹರಣೆಗೆ, ಒಂದು ಕಾರ್ಖಾನೆಯಲ್ಲಿ ಪ್ರತಿ ಕಾರ್ಮಿಕನ ಶಿಷ್ಟೀಕೃತ ಉತ್ಪಾದನೆ ದಿನಕ್ಕೆ 25 ಏಕಮಾನಗಳು ಎಂದು ನಿಗದಿಪಡಿಸಿ, ದಿನಕ್ಕೆ ಇಷ್ಟು ಅಥವಾ ಇದಕ್ಕಿಂತ ಹೆಚ್ಚು ಉತ್ಪಾದಿಸುವ ಕಾರ್ಮಿಕನಿಗೆ ಅವನು ಉತ್ಪಾದಿಸುವ ಪ್ರತಿ ಏಕಮಾನಕ್ಕೆ 60 ಪೈಸೆಯಂತೆಯೂ ಇದಕ್ಕಿಂತ ಕಡಿಮೆ ಉತ್ಪಾದಿಸಿದರೆ ಪ್ರತಿ ಏಕಮಾನಕ್ಕೆ 40 ಪೈಸೆಯಂತೆಯೂ ಕೂಲಿ ನಿಗದಿಯಾಗಿದೆಯೆಂದು ಭಾವಿಸಬಹುದು. ಒಂದು ದಿನದಲ್ಲಿ ಒಬ್ಬ ಕಾರ್ಮಿಕ 25 ಏಕಮಾನಗಳಿಗಿಂತ ಕಡಿಮೆಯನ್ನು 20 ಏಕಮಾನಗಳನ್ನು ಉತ್ಪಾದಿಸಿದರೆ ಪ್ರತಿ ಏಕಮಾನಕ್ಕೂ 40 ಪೈಸೆಯಂತೆ ಅವನ ಕೂಲಿ ರೂ. 8 ಆಗುತ್ತದೆ. ಇನ್ನೊಬ್ಬ ಕಾರ್ಮಿಕ ಒಂದು ದಿನದಲ್ಲಿ. 25 ಏಕಮಾನಗಳನ್ನು ಉತ್ಪಾದಿಸಿದರೆ ಅವನಿಗೆ ಪ್ರತಿ ಏಕಮಾನಕ್ಕೂ 60 ಪೈಸೆಯಂತೆ ಕೂಲಿ  ಕೊಡಲಾಗುತ್ತದೆ ಅಂದರೆ ಅವನ ಕೂಲಿ ರೂ.15 ಆಗುತ್ತದೆ. ಮತ್ತೊಬ್ಬನ ಒಂದು ದಿನದ ಉತ್ಪಾದನೆ 27 ಏಕಮಾನಗಳಾದರೆ ಅವನಿಗೂ 60 ಪೈಸೆಯಂತೆ ಎಂದರೆ ರೂ. 16.20-ಕೂಲಿ ಸಲ್ಲುತ್ತದೆ.

	ಟೇಲರನ ಭೇದಾತ್ಮಕ ತುಂಡು ದರದ ಅನ್ವಯದಿಂದ ಹೆಚ್ಚು ದಕ್ಷ ಕೆಲಸಗಾರ ಹೆಚ್ಚಿನ ಕೂಲಿ ಪಡೆಯುವುದು ಸಾಧ್ಯವಾಗುತ್ತದೆ. ಕಡಿಮೆ ದಕ್ಷತೆಯಿರುವ ಕೆಲಸಗಾರನಿಗೆ ಈ ವಿಧಾನ ದಂಡ ವಿಧಿಸುತ್ತದೆ. ದಕ್ಷತೆಯಿಲ್ಲದೆ ಕೆಲಸಗಾರರು ತಾವಾಗಿಯೇ ನಿವಾರಿಸಲ್ಪಡುತ್ತಾರೆ. ಅತ್ಯುತ್ತಮ ಕೆಲಸಗಾರರಷ್ಟೆ ಕೆಲಸಕ್ಕೆ ಆಕರ್ಷಿತರಾಗುತ್ತಾರೆ ಮತ್ತು ಕೆಲಸದಲ್ಲಿ ಉಳಿಯುತ್ತಾರೆ. ಹೆಚ್ಚು ದಕ್ಷತೆ ಹಾಗೂ ಶ್ರಮಕ್ಕೆ ಉದಾರ ಪ್ರತಿಪಲ ದೊರಕಿಸುವುದು ಮತ್ತು ಕಡಿಮೆ ದಕ್ಷತೆ ಹಾಗೂ ವಿಳಂಬ ಪ್ರವೃತ್ತಿಯನ್ನು ದಂಡಿಸುವುದು-ಈ ಎರಡು ಸಾಧ್ಯವಿರುವುದು ಈ ಯೋಜನೆಯ ವಿಶೇಷ ಗುಣ. ವ್ಯವಸ್ಥಾಪನೆಗೆ ಹೆಚ್ಚು ಉತ್ಪಾದನೆಯ ಲಾಭ ದೊರೆಯುತ್ತದೆ.

	ಟೇಲರನ ಭೇದಾತ್ಮಕ ತುಂಡು ದರದಲ್ಲಿ ಕೆಲವು ತೀವ್ರ ಪ್ರತಿಕೂಲಗಳುಂಟು. ಈ ವಿಧಾನವನ್ನು ಅನ್ವಯಿಸುವುದು ಕಷ್ಟಕರ. ಕೆಲಸದ ಪರಿಸ್ಥಿತಿಗಳನ್ನು ಶಿಷ್ಟೀಕರಿಸುವುದು ಸುಲಭವಲ್ಲ. ಶಿಷ್ಟ ಉತ್ಪಾದನೆಯನ್ನು ನಿರ್ಧರಿಸುವುದೂ ಕಷ್ಟವೇ. ಈ ನಿಟ್ಟಿನಲ್ಲಿ ವ್ಯವಸ್ಥಾಪಕನಿಗೆ ಬಹಳ ಹೆಚ್ಚಿನ ಅಧಿಕಾರ ಕೊಡಲಾಗಿದೆ. ಅವನು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯುಂಟು. ಸಾಮಾನ್ಯ ಕಾರ್ಮಿಕರು ನಿಲುಕಲಾರದ ಮಟ್ಟದಲ್ಲಿ ಶಿಷ್ಟ ಉತ್ಪಾದನೆಯನ್ನು ನಿಗದಿಗೊಳಿಸಿ ಕಾರ್ಮಿಕರಿಗೆ ಮೋಸಮಾಡುವುದು ಸಾಧ್ಯ. ಶಿಷ್ಟೀಕೃತ ಉತ್ಪಾದನೆಯನ್ನು ತಲುಪಲಾರದ ಕಾರ್ಮಿಕ ಒಟ್ಟಿನಲ್ಲಿ ಕಡಿಮೆ ಕೂಲಿಯನ್ನು, ಕಡಿಮೆ ದರದಲ್ಲಿ ಪಡೆಯುತ್ತಾನೆ. ಮೇಲಿನ ಉದಾಹರಣೆಯಲ್ಲಿ 24 ಏಕಮಾನಗಳನ್ನು ಉತ್ಪಾದಿಸಿದ ಕಾರ್ಮಿಕನಿಗೆ ಪ್ರತಿ ಏಕಮಾನಕ್ಕೆ 40 ಪೈಸೆಯಂತೆಯೂ  25 ಏಕಮಾನಗಳನ್ನು ಉತ್ಪಾದಿಸಿದವನಿಗೆ ಪ್ರತಿ ಏಕಮಾನಕ್ಕೆ 60 ಪೈಸೆಯಂತೆಯೂ ಕೂಲಿ ಪಾವತಿಯಾಗುತ್ತದೆ. ಇವರಿಬ್ಬರ ನಡುವಣ ಕೂಲಿಗಳ ಅಂತರ ನ್ಯಾಯವಾದ್ದೆನಿಸುವುದಿಲ್ಲ. ಆದ್ದರಿಂದ ಕಾರ್ಮಿಕರಲ್ಲಿ ಸಹಜವಾಗಿ ಅಸಂತೋಷ ಮೂಡುತ್ತದೆ. ಹೆಚ್ಚು ದಕ್ಷ ಕೆಲಸಗಾರನೂ ಈ ಪದ್ಧತಿಯ ಆಮಿಷಕ್ಕೆ ಮಾರುಹೋಗಿ ಅತಿಯಾಗಿ ದುಡಿದು ಆರೋಗ್ಯವನ್ನು ದಕ್ಷತೆಯನ್ನೂ ಕಳೆದುಕೊಳ್ಳಬಹುದು. ಈ ಯೋಜನೆಯಲ್ಲಿ ಪ್ರತಿ ಕಾರ್ಮಿಕನಿಗೂ ಕನಿಷ್ಠ ಕೂಲಿಯ ಭರವಸೆ ಇಲ್ಲದಿರುವುದು ಇನ್ನೊಂದು ಮುಖ್ಯ ಕೊರತೆ. ಈ ಕಾರಣಗಳಿಂದಾಗಿ ಟೇಲರನ ಭೇದಾತ್ಮಕ ತುಂಡು ದರ ಜನಪ್ರಿಯವಾಗಲಿಲ್ಲ. ಇದು ಈಗ ಬಳಕೆಯಲ್ಲಿ ಇಲ್ಲವೇ ಇಲ್ಲವೆನ್ನಬಹುದು.
(ಡಿ.ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ